	ಆಟೋಮ್ಯಾಟಿಸಂ
ಇಚ್ಛೆ ಅಥವಾ ಪ್ರಜ್ಞೆಯ ಸಹಾಯವಿಲ್ಲದೆ, ವಿಚಾರಾಪೇಕ್ಷೆಯಿಲ್ಲದೆ, ಅಪ್ರಯತ್ನವಾಗಿ, ತನ್ನಷ್ಟಕ್ಕೆ ತಾನೇ ಅಭ್ಯಾಸಗತವಾಗಿ ಯಂತ್ರ ಸದೃಶವಾಗಿ ನಡೆಯುವ ವ್ಯಾಪಾರದ ಭಾವವನ್ನು ಸೂಚಿಸುವ ಪದ (ಸ್ವಚಲತಾ; ಪ್ರಕೃತಿ ಬೋಧನಾವಾದ; ಸ್ವತಃಕ್ರಿಯಾ).

ಜೀವಿಗಳಲ್ಲಿ ಬಾಹ್ಯಪ್ರಚೋದನೆಯಿಲ್ಲದೆ, ಸಂಕಲ್ಪವಿಲ್ಲದೆ ನಡೆಯುವ ವ್ಯಾಪಾರಗಳಿಗೆ ಆಟೋಮ್ಯಾಟಿಕ್ ಕ್ರಿಯೆ ಎನ್ನುತ್ತಾರೆ. ಪಶು ಪ್ರಾಣಿಗಳು ಕೇವಲ ಪ್ರಕೃತಿ ಚೋದಿಗಳೆಂದು ಶರೀರ ವಿಜ್ಞಾನಿಗಳು ವಾದಿಸುತ್ತಾರೆ. ರಾಸಾಯನಿಕ, ಭೌತಿಕ ಪ್ರಕ್ರಿಯೆಗಳಿಂದ ಸ್ವಯಂ ಚಲನಶಕ್ತಿ, ಪ್ರಚೋದನಶಕ್ತಿಯುಂಟಾಗುತ್ತದೆಂದು ಹೇಳುತ್ತಾರೆ.
ಆದಿಯಲ್ಲಿ ಸಂಕಲ್ಪಾನ್ವಿತವಾದ ಕ್ರಿಯೆಗಳು ಕ್ರಮೇಣ ಅತಿಪುನರಾವೃತ್ತಿಯ ದೆಸೆಯಿಂದ ಬುದ್ಧಿ, ಗಮನ ಇಲ್ಲದೆ ತಾನಾಗಿ ನಡೆಯುವ ರೂಢಿಯ, ಅಭ್ಯಾಸದ ಕೆಲಸಗಳಾಗುತ್ತವೆಂದು ಮನಶ್ಶಾಸ್ತ್ರಜ್ಞರು ವಾದಿಸುತ್ತಾರೆ. ಸಂಕಲ್ಪ, ಪ್ರಜ್ಞೆ ಇವುಗಳ ಆಧಾರವನ್ನುಳ್ಳ ಉದ್ದೇಶಪೂರಿತಕ್ರಿಯೆಗಳು ಕ್ರಮೇಣ ಅಸಂಕಲ್ಪಿತ. ಪ್ರಜ್ಞಾವಿಹೀನ ರೂಢಿಕ್ರಿಯೆಗಳಾದಲ್ಲಿ ಈ ಉತ್ತರೋತ್ತರಸ್ಥಿತಿಗೆ ಮೂಲ ಆಟೋಮ್ಯಾಟಿಸಂ ಎಂದು ಹೇಳಬಹುದು. ಅವು ಪ್ರಜ್ಞೆಯ ಮಟ್ಟದಿಂದ ನಿಗೂಢಪ್ರಜ್ಞೆಯ ಆಳಕ್ಕೆ ಸಂದಿರುತ್ತವೆ. ಮನೋವ್ಯಾಪಾರಗಳನ್ನು ಕುರಿತ ಶರೀರ ವಿಜ್ಞಾನಭಾಗದಲ್ಲಿ, ಮನೋಭೌತ ಅಥವಾ ಮನಃಶ್ಶರೀರಶಾಸ್ತ್ರದಲ್ಲಿ ಈ ಪರಿಸ್ಥಿತಿಗೆ ಮನಸ್ಸಿಗೂ ದೇಹಕ್ಕೂ ಇರುವ ಸಾಮಾನ್ಯ ಸಂಬಂಧಗಳ ಸಮಾಂತರತೆ ಎಂದೆನ್ನುತ್ತಾರೆ. ಉದಾಹರಣೆ: ನಾವು ನಡೆಯುವ, ಓದುವ, ಬರೆಯುವ ಕ್ರಿಯೆಗಳು.

ನೀತಿ ವಿಮರ್ಶೆಯಲ್ಲೂ ಕೆಲವು ಕ್ರಿಯೆಗಳು ಅಪ್ರೇರಿತ ಕ್ರಿಯೆಗಳೇ ಅಥವಾ ಸ್ವಂತ ಇಷ್ಟದಿಂದ ಮಾಡಿದ ಕ್ರಿಯೆಗಳೇ ಎಂಬ ಸಂದಿಗ್ಧ ಪರಿಸ್ಥಿತಿ ಒದಗುತ್ತದೆ. ಅಪ್ರೇರಿತ ಕ್ರಿಯೆಗಳು ನಿತ್ಯತೀತವಾದುವು.

ಕೆಲವು ವ್ಯಕ್ತಿಗಳಲ್ಲಿ ಅತೀತಸಾಮಾನ್ಯವರ್ತನೆಗಳು (ಸೂಪರ್ ನಾರ್ಮಲ್) ಕಂಡು ಬರಬಹುದು. ಇಂಥ ಸಂದರ್ಭಗಳಲ್ಲಿ ಅಲ್ಲಿ ಕಂಡುಬರುವ ಆಟೋಮ್ಯಾಟಿಸಂ ಪರಿಸ್ಥಿತಿಗಳಲ್ಲಿ ಪ್ರಕೃತ್ಯತೀತ, ಅತಿಲೌಕಿಕ, ಅದ್ಭುತಕ್ರಿಯೆಗಳನ್ನು ವಿವರಿಸಲು, ವಿಮರ್ಶಿಸಲು, ಭೂತ, ಪ್ರೇತ, ಪಿಶಾಚಿ, ಯಕ್ಷ ಮುಂತಾದುವು ಆವೇಶಿಸಿವೆ ಎಂದು ಊಹಿಸಬೇಕಾಗುತ್ತದೆ. ಈ ಅಭೌತಶಕ್ತಿಗಳನ್ನು ಮನಶ್ಶಾಸ್ತ್ರದಲ್ಲಿ ಈಗೀಗ ವಿಚಾರ ಮಾಡುತ್ತಿದ್ದಾರೆ.  
(ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ